Friday, August 12, 2011

ಬ್ರೇಕಿಂಗ್ ನ್ಯೂಸ್

ಟಿವಿ ೬೯, ಕರ್ಣ ಕಠೋರ ಟಿವಿ, ಊದುವ ಟಿವಿ, ಗಂಟೆ ಟಿವಿ, ಆ ಟಿವಿ-ಗಳು ಸದ್ಯಕ್ಕೆ ಕರ್ನಾಟಕದಲ್ಲಿ ಚಾಲ್ತಿಯಲ್ಲಿವೆ. ಇನ್ನೂ ಹಲವಾರು ನ್ಯೂಸ್ ಚಾನಲ್ಲುಗಳು ಮನೋರಂಜನೆಯ ಮಹಾಪೂರದಿಂದ ಕನ್ನಡಿಗರ ಮನತಣಿಸಲು ಸಧ್ಯದಲ್ಲೇ ಪ್ರಾರಂಭಗೊಳ್ಳುವ ಸೂಚನೆಗಳು ದಟ್ಟವಾಗಿದೆ. ಈ ಟಿ ವಿ ಚಾನಲ್ಲುಗಳು ಭಾರೀ ಪೈಪೋಟಿಯಿಂದ ಬ್ರೇಕಿಂಗ್ ನ್ಯೂಸ್, ಎಕ್ಸ್ ಕ್ಲೂಸಿವ್ ಗಳನ್ನು ನೀಡತೊಡಗಿವೆ. ಅವುಗಳಲ್ಲಿ ಬಿತ್ತರವಾಗುವ ಗಂಭೀರ ಸುದ್ದಿಗಳು, ರಾಜಕೀಯ ಚಕಮಕಿ, ಬ್ರೇಕಿಂಗ್ ಸುದ್ದಿಗಳು, ಪ್ರಾಯೋಜಿತ ಪಾನಲ್ ಡಿಸ್ಕಷನ್ ಗಳು ಹೇಗಿರುತ್ತವೆಂಬುದರ ಬಗೆಗಿನ ವಿಡಂಬನಾತ್ಮಕ ಬರಹವಿದು.
ಟಿವಿ ೬೯ ಸಧ್ಯಕ್ಕೆ ಹೆಚ್ಚು ಚಾಲ್ತಿಯಲ್ಲಿರುವ ನ್ಯೂಸ್ ಚಾನಲ್ ಎಂದು ತನ್ನನ್ನು ಕರೆದುಕೊಳ್ಳುತ್ತಿದೆ. ಇದರಲ್ಲಿ ಬೆಳಿಗ್ಗೆ ವಿಲನ್ ನಂತೆ ಕಾಣಿಸಿಕೊಳ್ಳುವ ವ್ಯಕ್ಯಿ ಸಂಜೆ ಹೊತ್ತಿಗೆ ನಾಯಕನಂತೆ ಕಂಗೊಳಿಸುತ್ತಾನೆ. ಈ ಟಿವಿ ೬೯ ಯಾವಾಗ ಆರು ಅಗಿರುತ್ತದೆ ಯಾವಾಗ ಒಂಭತ್ತು ಆಗಿರುತ್ತದೆ ಹೇಳಲಾಗುವುದಿಲ್ಲ! ಸಣ್ಣದಿರಲಿ, ದೊಡ್ಡದಿರಲಿ ಬೇಗನೇ ಜನರಿಗೆ ಮುಟ್ಟಿಸಬೇಕೆಂಬ ಆತುರದಲ್ಲಿಯೇ ಈ ಟಿವಿ ಬ್ರೇಕಿಂಗ್ ನ್ಯೂಸ್ ಗಳನ್ನು ನೀಡುವ ಪರಿ ಹೇಗಿರುತ್ತದೆಂದರೆ...
ಸುದ್ದಿ ನಿರೂಪಕಿ :(ವಾರ್ತೆಯನ್ನು ಓದುತ್ತಾ) "ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಮನೆ ಮಠವನ್ನೆಲ್ಲಾ ಕಳೆದುಕೊಂಡು ಬೀದಿ ಪಾಲಾಗಿರುವ ರೈತರ ಬವಣೆಯನ್ನು ಈ ವಿಶೇಷ ಕಾರ್ಯಕ್ರಮದ ಮೂಲಕ ನಾವೀಗ ನಿಮ್ಮ ಮುಂದಿಡುತ್ತಿದ್ದೇವೆ, ನಮ್ಮ ವರದಿಗಾರ ಪ್ರವಾಹ ಪೀಡಿತ ರೈತರೊಂದಿಗೆ ನಡೆಸುವ ನೇರ ಸಂದರ್ಶನ ಇದೋ ನಿಮಗಾಗಿ ಟಿ ವಿ ಸಿಕ್ಸ್ಟಿ ನೈನ್ ನಲ್ಲಿ ಮಾತ್ರ"...

ರೈತನೊಬ್ಬ ದುಃಖತಪ್ತನಾಗಿ ಪ್ರವಾಹ ಪೀಡಿತನಾದ ತನ್ನ ನೆರವಿಗೆ ಸರ್ಕಾರ ಬಾರದಿದ್ದರಿಂದ ತನ್ನಿಬ್ಬರು ಎಳೇ ವಯಸ್ಸಿನ ಮಕ್ಕಳು ಚಳಿ ಮಳೆಯನ್ನು ತಾಳಲಾರದೇ ಸತ್ತ ಹೃದಯ ವಿದ್ರಾವಕ ಘಟನೆಯ ಬಗ್ಗೆ ಮಾತನಾಡಲು ಆರಂಭಿಸತೊಡಗುತ್ತಾನೆ. ಆ ಹೊತ್ತಿನಲ್ಲೇ ಟಿವಿ ಪರದೆಯ ಮೇಲೆ ಬ್ರೇಕಿಂಗ್ ನ್ಯೂಸ್ ಒಂದು ಕಾಣಿಸಿಕೊಳ್ಳುತ್ತದೆ. ರೈತನ ಮುಖ ಮರೆಯಾಗಿ -ಹುಚ್ಚು ನಾಯಿಯನ್ನು ಅಟ್ಟಾಡಿಸಿಕೊಂಡು ಕೊಂದ ಜನರು- ಎಂಬ ಸುದ್ದಿ ಪ್ರತ್ಯಕ್ಷವಾಗುತ್ತದೆ. ಕೂಡಲೇ ವಾರ್ತಾ ನಿರೂಪಕಿ ಮಧ್ಯೆ ಪ್ರವೇಶಿಸಿ "ಈಗ ಬಂದ ಸುದ್ದಿಯೆಂದರೆ ಬೆಂಗಳೂರಿನಲ್ಲಿ ಜನರನ್ನು ಕಚ್ಚಲು ಹೋಗುತ್ತಿದ್ದ ಹುಚ್ಚು ನಾಯಿಯೊಂದನ್ನು ಜನರೇ ಅಟ್ಟಾಡಿಸಿಕೊಂಡು ಕೊಂದ ಘಟನೆ ನಡೆದಿದೆ. ಅದು ನಿಜವಾಗಲೂ ಹುಚ್ಚು ನಾಯಿಯಾಗಿತ್ತೋ, ಅಥವಾ ತಲೆಕೆಟ್ಟ ಜನರು ಅದನ್ನು ಕೊಂದು ಹಾಕಿದರೋ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾವೀಗ ನಾಯಿಯನ್ನು ಕೊಂದು ಹಾಕಿರುವ ಸ್ಥಳದಲ್ಲಿಯೇ ಇರುವ ನಮ್ಮ ಪ್ರತಿನಿಧಿಯನ್ನು ನೇರವಾಗಿ ಸಂಪರ್ಕಿಸಲಿದ್ದೇವೆ"...ಎಂದು ಶುರು ಮಾಡುತ್ತಾಳೆ.

ಪ್ರವಾಹದಿಂದಾಗಿ ಸಾವಿರಾರು ರೈತರು ಅನುಭವಿಸುತ್ತಿರುವ ಕಷ್ಟವನ್ನು ಹೇಳಿಕೊಳ್ಳಲು ಸಿದ್ದನಾಗಿದ್ದ ರೈತನ ಸಂದರ್ಶನ ಹುಚ್ಚು ನಾಯಿ ಸತ್ತ ಬ್ರೇಕಿಂಗ್ ಸುದ್ದಿಯಿಂದಾಗಿ ಅಲ್ಲಿಗೇ ಕಟ್ ಆಗುತ್ತದೆ.
ಹುಚ್ಚು ನಾಯಿ ಸತ್ತ ಸ್ಥಳದಲ್ಲಿದ್ದ ವರದಿಗಾರ ಸತ್ತ ನಾಯಿಯ ಶವವನ್ನು ತೋರಿಸುತ್ತಾ ಅದರ ಬಗ್ಗೆ ವಿವರಣೆ ನೀಡಲಾರಂಭಿಸುತ್ತಾನೆ.
ವರದಿಗಾರ: "ನೋಡಿ ಮೇಡಂ, ಈಗ ತಾನೇ ಈ ನಾಯಿ ಸತ್ತು ಬಿದ್ದಿದೆ. ನಾಯಿಯನ್ನು ಜನರು ಅಟ್ಟಾಡಿಸಿಕೊಂಡು ಹೊಡೆಯುವ ಸುದ್ದಿ ನಮ್ಮ ಕಿವಿಗೆ ಬಿದ್ದ ತಕ್ಷಣ ನಾವು ಸ್ಥಳಕ್ಕೆ ಧಾವಿಸಿದೆವು. ಅಷ್ಟರಲ್ಲಿ ಜನ ಈ ನಾಯಿಯನ್ನು ಕೊಂದು ಹಾಕಿದ್ದರಿಂದ ನಮಗೆ ಅದರ ನೇರ ದೃಶ್ಯವನ್ನು ನಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಲಿಲ್ಲ, ಅದಕ್ಕಾಗಿ ನಾವು ನಮ್ಮ ವೀಕ್ಷಕರ ಕ್ಷಮೆ ಯಾಚಿಸುತ್ತೇವೆ, ನಮಗೆ ಮಾಹಿತಿ ನೀಡಿದ ವ್ಯಕ್ತಿ ನಮಗೆ ಸರಿಯಾಗಿ ವಿಳಾಸ ತಿಳಿಸುವಲ್ಲಿ ವಿಫಲನಾದುದರಿಂದ ನಾವು ಸರಿಯಾದ ಸಮಯಕ್ಕೆ ಈ ಜಾಗವನ್ನು ತಲುಪಲಾಗಲಿಲ್ಲ... ಇಲ್ಲಿ ನಮಗಿರುವ ಅನುಮಾನವೆಂದರೆ ಈ ನಾಯಿಗೆ ನಿಜವಾಯೂ ಹುಚ್ಚು ಹಿಡಿದಿತ್ತೇ ಎಂಬುದು, ನಾವು ಅದರ ಬಗ್ಗೆ ಇಲ್ಲಿಯ ಜನರನ್ನು ವಿಚಾರಿಸಿದಾಗ ಅವರು ಭಿನ್ನವಾದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ...."

ಆತನ ಮಾತನ್ನು ಅರ್ಧದಲ್ಲಿಯೇ ತುಂಡರಿಸಿದ ನಿರೂಪಕಿ: "ಅಲ್ಲ ಇವರೇ, ನಾಯಿಗೆ ನಿಜವಾದ ಹುಚ್ಚು ಹಿಡಿದಿತ್ತೋ ಅಥವಾ ಆ ನಾಯಿಯ ಬಗ್ಗೆ ಯಾರಿಗಾದರೂ ದ್ವೇಷವಿತ್ತೋ ಅಂತ ನನ್ನ ಪ್ರಶ್ನೆ. ಯಾಕೆಂದರೆ ಅಲ್ಲಿನ ಜನರು ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ ಎಂದು ಹೇಳುತ್ತಿದ್ದೀರಿ...ಯಾತಕ್ಕಾಗಿ ಈ ಭಿನ್ನ ಅಭಿಪ್ರಾಯ ಎಂಬುದೇನಾದರೂ ನಿಮ್ಮ ಗಮನಕ್ಕೆ ಬಂದಿದೆಯಾ? ಆ ನಾಯಿ ಯಾವ ಜಾತಿಯದ್ದು? ಯಾವ ಬಣ್ಣದ್ದು? ಅದು ಸಾಕಿದ ನಾಯೋ ಅಥವಾ ಬೀದಿ ನಾಯಿಯೋ? ಅದರ ಬಗ್ಗೆ ಸಂಫೂರ್ಣ ಮಾಹಿತಿ ನೀಡ್ತೀರಾ?" ಎಂದು ಕೇಳಿದೊಡನೇ...

ಆ ವರದಿಗಾರ: "ಮೇಡಂ, ನಾವು ಈ ನಾಯಿಯ ಬಗೆಗಿನ ಪೂರ್ವಾಪರಗಳನ್ನು ತಿಳಿದುಕೊಳ್ಳಲು ಇಲ್ಲಿನ ಜನರನ್ನು ಕೇಳಿದಾಗ ಅವರು ’ಹೋಗ್ರೀ ಹುಚ್ಚು ನಾಯಿ ಬಗ್ಗೆ ಕೇಳ್ತೀರಲ್ರೀ’ ಎಂಬ ಉಡಾಫ಼ೆಯಿಂದ ಮಾತನಾಡುತ್ತಿದ್ದಾರೆ, ಇದರ ಬಗ್ಗೆ ತಲೆಕೆಡಿಸಿಕೊಂಡ ನಾವು ಮಾನವ ಹಕ್ಕು ಆಯೋಗದ ಗಮನಕ್ಕೆ ತಂದಾಗ ಅಲ್ಲಿದ್ದವರು ’ನೋಡ್ರೀ ಮನುಷ್ಯರ ಮೇಲೆ ದೌರ್ಜನ್ಯ ನಡೆದಲ್ಲಿ ಸ್ಪಂದಿಸುವುದು ನಮ್ಮ ಕೆಲಸ. ನಾಯಿ ನರಿಗಳ ಮೇಲೆ ನಡೆದ ಹಲ್ಲೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಪ್ರಾಣಿ ದಯಾ ಸಂಘದವರಿದ್ದಾರಲ್ಲಾ ಅವರಿಗೆ ಹೇಳಿ’ ಅಂದುಬಿಟ್ಟರು ಮೇಡಂ. ಈ ಬಗ್ಗೆ ನಾವು ಪ್ರಾಣಿ ದಯಾ ಸಂಘದವರನ್ನೂ ಸಂಪರ್ಕಿಸಿದೆವು ಮೇಡಂ...’ಬದುಕಿರುವ ಪ್ರಾಣಿಗಳ ಬಗ್ಗೆಯಷ್ಟೇ ನಮ್ಮ ಗಮನ. ಸತ್ತಿದ್ದರೆ ಕಾರ್ಪೋರೇಷನ್ನಿನವರಿಗೆ ಹೇಳಿ. ಅವರು ಎತ್ತಿ ಹಾಕ್ತರೆ ಅಂತ ಅವ್ರೂ ಉಡಾಫ಼ೆಯಿಂದ ಮಾತನಾಡಿ ಬಿಟ್ರು ಮೇಡಂ, ನಮಗೆ ಮುಂದೇನು ಮಾಡಬೇಕೆಂದು ದಿಕ್ಕು ತೋಚದೇ ಸತ್ತ ನಾಯಿಯ ಶವದ ಮುಂದೆ ನಿಂತಿದ್ದೇವೆ ಮೇಡಮ್"...

ಕೂಡಲೇ ಸುದ್ದಿ ನಿರೂಪಕಿ: "ನೊಡೀ ಇವರೇ, ನೀವು ಅಲ್ಲೇ ಇರಿ. ಜಾಗ ಬಿಟ್ಟು ಕದಲಬೇಡಿ, ನಾವೀಗ ಇದರ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡುವ ಸಲುವಾಗಿ ನಮ್ಮ ಸ್ಟುಡಿಯೋದಲ್ಲಿರುವ ಮುಖ್ಯ ವರದಿಗಾರರನ್ನು ಸಂಪರ್ಕಿಸಲಿದ್ದೇವೆ" ಅಂತ ಅಲ್ಲಿ ಕುಳಿತಿದ್ದ ಗಡ್ಡಧಾರಿಯೊಬ್ಬರನ್ನು ಪ್ರಶ್ನೆ ಕೇಳುತ್ತಾಳೆ. "ನೋಡೀ ಇವ್ರೇ, ಒಂದು ನಾಯಿಯನ್ನು ಜನ ಅಟ್ಟಾಡಿಸಿ ಕೊಂದರೂ ಸಾರ್ವಜನಿಕರೂ ಸೇರಿದಂತೆ ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ಮಾನವ ಹಕ್ಕು ಆಯೋಗದವರು ನಾಯಿ ನರಿಗಳು ನಮಗೆ ಸಂಬಂದಿಸಿಲ್ಲ ಅಂತಾರಂತೆ ಇನ್ನು ಪ್ರಾಣಿ ದಯಾ ಸಂಘದವರು ಸತ್ತ ಪ್ರಾಣಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಅಂತಾರಂತೆ, ಇನ್ನು ಕಾರ್ಪೋರೇಷನ್ನಿನವರಂತೂ ಬಿಡ್ರೀ ದಿನಕ್ಕೆ ನೂರಾರೂ ಹುಚ್ಚು ನಾಯಿಗಳು ಸಾಯ್ತವೆ ಅಂತಾರಂತೆ. ಇದರ ಹೊಣೆ ಯಾರು ಹೊರಬೇಕು ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?"

ಅದಕ್ಕೆ ಸ್ಟುಡಿಯೊದಲ್ಲಿರುವ ಆ ವರದಿಗಾರ: "ಮೇಡಂ, ಇದು ಬಗೆಹರಿಯದ ಪ್ರಶ್ನೆಯಾಗಿದೆ, ಆ ನಾಯಿ ಹಲವಾರು ಜನರನ್ನು ಕಚ್ಚಿತ್ತು ಎಂಬ ಮಾಹಿತಿ ನಮಗೀಗ ಲಭ್ಯವಾಗಿದೆ. ಜನರನ್ನು ಕಚ್ಚಿದ ಮಾತ್ರಕ್ಕೆ ಅದನ್ನು ಹಾಗೆ ದಾರುಣವಾಗಿ ಚಚ್ಚಿ ಹಾಕಬೇಕೆಂದು ಕಾನೂನಿಲ್ಲ, ಆ ರೀತಿ ಅದನ್ನು ಕೊಂದು ಹಾಕಿರುವುದು ನನ್ನ ದೃಷ್ಟಿಯಲ್ಲಿ ಆಕ್ಷಮ್ಯ ಅಪರಾಧ ಮೇಡಂ"...

ಅಲ್ಲಿ ದೂರದ ಉತ್ತರ ಕರ್ನಾಟಕದಲ್ಲಿ ತನ್ನ ಕರುಣಾಜನಕ ಕಥೆಯನ್ನು ಟಿ ವಿ ಯವರ ಮುಂದೆ ಹೇಳಿಕೊಳ್ಳಲು ನಿಂತಿದ್ದ ರೈತ "ಇದ್ಯಾಕ್ ಸ್ವಾಮೀ, ಸುಮ್ಮನೆ ನಿಂತ್ರೀ? ಮಾತಾಡ್ಲೋ, ಬೇಡ್ವೋ, ಅಂತ ಅಲ್ಲಿದ್ದ ವರದಿಗಾರನಿಗೆ ಕೇಳಿದ.
ಕೂಡಲೇ ಆ ವರದಿಗಾರ: "ಸುಮ್ನಿರಯ್ಯಾ! ಈಗ ಬ್ರೇಕಿಂಗ್ ನ್ಯೂಸ್ ಹೋಗ್ತಾಯಿದೆ! ನಮ್ಮ ಚಾನೆಲ್ ದೇ ಫಸ್ಟ್ ನ್ಯೂಸು. ಬೆಂಗಳೂರಲ್ಲಿ ಜನ ಹುಚ್ಚು ನಾಯಿಯನ್ನು ಕೊಂದು ಹಾಕಿದ್ದಾರೆ, ಅದರ ಬಗ್ಗೆ ನಮ್ಮ ಚಾನಲ್ ನವರೆಲ್ಲಾ ಬ್ಯುಸಿಯಾಗಿದ್ದಾರೆ, ಮೊದಲು ಅದು ಮುಗೀಲಿ ಆಮೇಲೆ ನಿನ್ನ ಕಥೆ..." ಅನ್ನುತ್ತಾನೆ. ಅದಕ್ಕೆ ಆ ರೈತ "ಅಲ್ಲಾ ಸ್ವಾಮಿ ಹುಚ್ಚು ನಾಯಿ ಸಾಯದೂ ಒಂದು ಸುದ್ದಿಯಾ?? ಹೊಟ್ಟೆಗ್ ಹಿಟ್ಟಿಲ್ದೆ, ಚಳಿ ತಾಳ್ದೆ, ಕಾಯಿಲೆ ಬಿದ್ದು ನನ್ನ ಎರಡೂ ಮಕ್ಳೂ ತೀರ್ಕಂಡವೆ. ನನ್ ಕಥೆ ಕೇಳ್ದೆ ನೀವು ಹುಚ್ಚು ನಾಯಿ ಕಥೆ ಕೇಳ್ಕಂಡಿದ್ದಿರಲ್ಲಾ"... ಎಂದು ಗೋಳಾಡುತ್ತಾ ಎದ್ದು ಹೋದ.

ಛಲ ಬಿಡದ ತ್ರಿವಿಕ್ರಮಿಯಂತೆ ಸುದ್ದಿ ನಿರೂಪಕಿ: "ನಾವೀಗ ನಾಯಿ ಸತ್ತ ಜಾಗದಲ್ಲಿರುವ ನಮ್ಮ ವರದಿಗಾರರನ್ನು ಭೇಟಿಯಾಗೋಣ, ನೋಡೀ ಇವರೇ, ನೀವು ಎಷ್ಟು ಹೊತ್ತಿನಿಂದ ಆ ಜಾಗದಲ್ಲಿಯೇ ಇದ್ದೀರಿ, ಸತ್ತ ನಾಯಿಯ ವಾರಸುದಾರರು ಯಾರಾದರೂ ಅಲ್ಲಿಗೆ ಬಂದರಾ, ಆ ನಾಯಿಯ ಯಾವ ಯಾವ ಜಾಗಕ್ಕೆ ಏಟು ಬಿದ್ದಿದೆ, ಅದರ ಪೋಸ್ಟ್ ಮಾರ್ಟಮ್ ಅನ್ನು ಮಾಡುತ್ತಾರೆಯೋ ಹೇಗೆ?"

ನಾಯಿ ಸತ್ತ ಜಾಗದಲ್ಲಿದ್ದ ವರದಿಗಾರ: "ಮೇಡಂ ಇಲ್ಲಿ ಯಾರೂ ಸ್ಥಳದಲ್ಲಿಲ್ಲ, ನಾನು ಮತ್ತು ನಮ್ಮ ಕ್ಯಾಮರಾ ಮೆನ್ ಇಬ್ಬರೇ ಇರುವುದು, ಈ ನಾಯಿ ನನ್ನದೆಂದು ಹೇಳಿಕೊಳ್ಳಲು ಯಾರೂ ಇಲ್ಲಿಗೆ ಬಂದಿಲ್ಲ, ಈ ಹುಚ್ಚು ನಾಯಿಯು ಹಲವಾರು ಜನರಿಗೆ ಕಚ್ಚಿರುವುದರಿಂದ ಈ ನಾಯಿಯನ್ನು ತನ್ನದೆಂದು ಹೇಳಿಕೊಂಡಲ್ಲಿ ಈ ನಾಯಿಗಾದ ಗತಿಯೇ ಅವರಿಗೂ ಆಗುವ ಸಂಭವವಿರುವುದರಿಂದ ಯಾರೂ ಬಂದಿಲ್ಲ. ಇನ್ನು ಈ ನಾಯಿಯನ್ನು ಪೋಸ್ಟ್ ಮಾರ್ಟಮ್ ಮಾಡುವ ಬಗ್ಗೆ ಕೇಳಿದ್ದೀರಿ, ಅದರ ಬಗ್ಗೆ ನಾವೇನಾದರೂ ಜನರಿಗೆ ಒತ್ತಾಯಿಸಿದಲ್ಲಿ ನಾಯಿಗೆ ಬಿದ್ದಂತೆ ನಮಗೆಲ್ಲಿ ಏಟು ಬೀಳುವುದೋ ಎಂಬ ಆತಂಕದಿಂದ ನಾವದರ ಬಗ್ಗೆ ಯಾರನ್ನೂ ಕೇಳಲಿಲ್ಲ. ಇನ್ನು ಸ್ವಲ್ಪ ಹೊತ್ತು ನಾವಿಲ್ಲಿಯೇ ಇದ್ದು ಈ ನಾಯಿಯ ಬಗ್ಗೆಯೇ ವರದಿ ಮಾಡುತ್ತಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತದೋ ನಮಗೇ ಗೊತ್ತಾಗುತ್ತಿಲ್ಲ ಮೇಡಂ..."

ಕೂಡಲೇ ನಿರೂಪಕಿ: "ನೋಡಿ ಇವರೇ, ಕೂಡಲೇ ನೀವು ಆ ಜಾಗ ಖಾಲಿ ಮಾಡಿ, ನಾಯಿ ಕಥೆ ಹಾಳಾಗಲಿ, ಅಲ್ಲಿ ನಮ್ಮ ಬೆಲೆ ಬಾಳುವ ಕ್ಯಾಮರಾಗಳು, ನೇರ ಪ್ರಸಾರದ ಸಲಕರಣೆಗಳಿರುವುದರಿಂದ ನೀವು ಅವುಗಳಿಗೆ ಯಾವುದೇ ಜಖಂ ಆಗದಂತೆ ಹುಶಾರಾಗಿ ಬಂದು ಬಿಡಿ" ಎಂದು ಹೇಳಿ ವೀಕ್ಷಕರತ್ತ ತಿರುಗಿ "ಪ್ರಿಯ ವೀಕ್ಷಕರೇ... ಸಮಯ ಮುಗಿಯುತ್ತಾ ಬಂದಿದೆ... ನಮ್ಮ ಇಂದಿನ ವಿಶೇಷ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ರೈತರ ಬವಣೆಯನ್ನು ನೇರ ಪ್ರಸಾರದ ಮೂಲಕ ಅಲ್ಲಿನ ರೈತರೇ ನಿಮ್ಮ ಮುಂದಿಟ್ಟಿದ್ದಾರೆ, ಕಾರ್ಯಕ್ರಮ ವೀಕ್ಷಿಸಿದ್ದಕ್ಕೆ ತಮಗೆ ಧನ್ಯವಾದಗಳು, ಕ್ಷಣ ಕ್ಷಣದ ಸುದ್ದಿಗಾಗಿ ನೋಡ್ತಾಯಿರಿ ಟಿ ವಿ ಸಿಕ್ಸ್ಟಿ ನೈನ್"

ಹುಚ್ಚು ನಾಯಿ ಸತ್ತ ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ತಮ್ಮ ಬವಣೆಯನ್ನು ಹೇಳಿಕೊಳ್ಳಲಾಗದೇ ನಿರ್ಗಮಿಸಿದ ಬಡ ರೈತರ ವಿಶೇಷ ಕಾರ್ಯಕ್ರಮ ಈ ರೀತಿಯಾಗಿ ಮುಗಿದಿತ್ತೆಂಬುದನ್ನು ಹೇಳುತ್ತಾ....
ಮುಂದಿನ ಸಂಚಿಕೆಯಲ್ಲಿ ಇತರೆ ನ್ಯೂಸ್ ಚಾನಲ್ಲುಗಳ ಮತ್ತಷ್ಟು ಬಹುಗುಣ ವಿಶೇಷತೆಗಳನ್ನು ನಿಮ್ಮ ಮುಂದಿಡಲಿದ್ದೇವೆ... ಅಲ್ಲಿವರೆಗೂ ಬ್ರೇಕಿಂಗ್ ನ್ಯೂಸ್ ಗಳ ತಾಪತ್ರಯವಿಲ್ಲದೇ ಸಮಾಧಾನವಾಗಿ ಬಾಳಿ ಎಂದು ಹಾರೈಸುತ್ತಾ...

No comments:

Post a Comment