Tuesday, August 16, 2011

ಸಮಯ 24x7 : ಜಿ.ಎನ್. ಮೋಹನ್

ಹಿರಿಯ ಪತ್ರಕರ್ತರಾದ ಜಿ.ಎನ್. ಮೋಹನ್ ಸಮಯ ಚಾನೆಲಿನ ಸಂಪಾದಕರಾಗಿ ಅಧಿಕಾರ ವಹಿಸಿದ್ದಾರೆ.ನ್ಯೂಸ್ ಚಾನಲ್ ಹೆಡ್ ಆಗಿ ಕೆಲಸ ಮಾಡುವುದು ಮೀಡಿಯಾ ಮಿರ್ಚಿ ಬರೆದಷ್ಟು ಸುಲಭವಲ್ಲ. ಅದು ಮೋಹನ್‌ರಿಗೆ ಚೆನ್ನಾಗಿಯೇ ಗೊತ್ತಿದೆ.ಜಿ.ಎನ್.ಮೋಹನ್ ಹಿಂದೆ ಪ್ರಜಾವಾಣಿಯಲ್ಲಿದ್ದವರು. ನಂತರ ಈಟಿವಿಗೆ ಬಂದು ಅದರ ನ್ಯೂಸ್ ಮುಖ್ಯಸ್ಥರಾಗಿ ಕೆಲಸ ಮಾಡಿದವರು ಮಾತ್ರವಲ್ಲ ಚಾನೆಲ್ ಗೆ ಒಂದು ಒಳ್ಳೆ ಹೆಸರು ತಂದು ಕೊಟ್ರು. ಬೆಂಗಳೂರು, ಮಂಗಳೂರು, ಗುಲ್ಬರ್ಗ, ಹೈದರಾಬಾದ್ ಮತ್ತು ಇತರೆಡೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ.
ಈ ಟಿವಿ ಬಿಟ್ಟ ನಂತರ ಅವರು ತಮ್ಮದೇ ಆದ ಮೇ ಫ್ಲವರ್ ಮೀಡಿಯಾ ಹೌಸ್ ಕಟ್ಟಿಕೊಂಡರು.ಪರ್ಯಾಯ ಮಾಧ್ಯಮದ ಕುರಿತು ಜಿ.ಎನ್.ಮೋಹನ್ ಹುಡುಕಾಟ ನಡೆಸುತ್ತಿದ್ದರು. ತನ್ನ ಕನಸಿನ ಕೂಸು ಮೇ ಫ್ಲವರ್ ಒಂದು ಸಂಸ್ಥೆಯನ್ನಾಗಿ ಬೆಳೆಸಲು ಯತ್ನಿಸಿದರು. ಅದು ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಆದರೆ ಪ್ರಯತ್ನಗಳಂತೂ ನಿಲ್ಲಲಿಲ್ಲ. ಮಾಧ್ಯಮ ಕೋರ್ಸುಗಳನ್ನು ಆರಂಭಿಸುವ ಪ್ರಯತ್ನ ನಡೆಸಿದರು. ಅವಧಿ ಎಂಬ ಸೊಗಸಾದ ಬ್ಲಾಗ್ ರೂಪಿಸಿದರು. ನಂತರ ಅದನ್ನು ವೆಬ್ ಸೈಟ್ ಮಾಡಿದರು. ಕನ್ನಡ ಪತ್ರಕರ್ತರ ಪೈಕಿ ಅತ್ಯಂತ ಹೆಚ್ಚು ಸಾಂಸ್ಕೃತಿಕ ವ್ಯಕ್ತಿತ್ವ ಹೊಂದಿದವರು ಮೋಹನ್. ಹೀಗಾಗಿಯೇ ವ್ಯಾವಹಾರಿಕ ಪ್ರಯತ್ನಗಳನ್ನು ಮಾಡಿದಾಗಲೆಲ್ಲ ಟೀಕೆಗೆ ಗುರಿಯಾದರು. ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದ ಜನರ ಜತೆಗೆ ಅವಿನಾಭಾವ ಸಂಬಂಧವಿಟ್ಟುಕೊಂಡಿರುವ ಮೋಹನ್ ಮೀಡಿಯಾ ಗ್ರಾಮರ್ ಚೆನ್ನಾಗಿ ಅರಿತವರು. ಈ ಟಿವಿಯಲ್ಲಿ ನಡೆಸಿದ ಪ್ರಯೋಗಗಳು ಇದಕ್ಕೆ ಸಾಕ್ಷಿ.
ನ್ಯೂಸ್ ಚಾನಲ್‌ಗಳು ಒಂದರ ಹಿಂದೊಂದರಂತೆ ಬರುವುದಕ್ಕೂ ಮುನ್ನ ಇದ್ದ ಮನರಂಜನಾ ಚಾನಲ್‌ಗಳಲ್ಲಿ ಅತಿಹೆಚ್ಚು ಪಾಪ್ಯುಲರ್ ಆಗಿದ್ದು ಈ ಟಿವಿ ನ್ಯೂಸ್. ಸುದ್ದಿಗೂ ಮನರಂಜನೆಯ ಟಚ್ ನೀಡಿದ ಮೊದಲಿಗರು ಮೋಹನ್. (ಅದೆಷ್ಟು ಸರಿ ಎಂಬ ಚರ್ಚೆ ಈಗಲೂ ಇದೆ.) ಪೂರ್ಣಚಂದ್ರ ತೇಜಸ್ವಿ ಸಾವಿನ ನಂತರ ಈಟಿವಿ ಸುದ್ದಿಯಲ್ಲಿ ಪ್ರಸಾರವಾದ ತೇಜಸ್ವಿ ನೆನಪು ಮಾಲಿಕೆ ಸದಾ ಕಾಲಕ್ಕೂ ಸ್ಮರಣೀಯ. ರಾಜಕೀಯ ವಿದ್ಯಮಾನಗಳಿಗೆ ಸಿನಿಮಾ ಹಾಡುಗಳ ಹಿನ್ನೆಲೆ ನೀಡಿ ಯಶಸ್ವಿಯಾಗಿದ್ದೂ ಜಿ.ಎನ್.ಮೋಹನ್ ಪ್ರಯೋಗವೇ.
ಆದರೆ ಈಗ ಕಾಲ ತುಂಬಾ ಮುಂದಕ್ಕೆ ಹೋಗಿದೆ. ಸುದ್ದಿ ಚಾನಲ್‌ಗಳ ಪೈಪೋಟಿ ವಿಪರೀತಕ್ಕೆ ಏರಿದೆ. ಜ್ಯೋತಿಷ್ಯ, ಕ್ರೈಂ, ಪುನರ್ಜನ್ಮ, ಸೆಕ್ಸ್ ಇತ್ಯಾದಿ ಮಸಾಲೆಗಳಿಲ್ಲದೆ ಸುದ್ದಿ ಚಾನಲ್ ನಡೆಸಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಏನನ್ನು ನೋಡುತ್ತಾರೆ ಎಂಬುದಷ್ಟೇ ಚಾನಲ್‌ಗಳಿಗೆ ಮುಖ್ಯ, ಏನನ್ನು ಕೊಡಬೇಕು ಎಂಬುದಲ್ಲ. ಹೀಗಿರುವಾಗ ಮೋಹನ್‌ರ ಸಾಂಸ್ಕೃತಿಕ ಅಭಿರುಚಿಗಳು ಅವರನ್ನು ಕಾಪಾಡುತ್ತವಾ ಎಂಬುದು ಮಹತ್ವದ ಪ್ರಶ್ನೆ. ಆದರೆ ಮೋಹನ್ ಇನ್ನೂ ಹುಡುಗು ಮನಸ್ಸಿನವರು, ಹೀಗಾಗಿ ಹೊಸಹೊಸ ಪ್ರಯೋಗಗಳನ್ನು ಮಾಡಬಲ್ಲರು ಎಂಬ ನಂಬಿಕೆಯೂ ಇದೆ.ಟಿವಿ9 ಎಲ್ಲ ನ್ಯೂಸ್ ಚಾನಲ್‌ಗಳಿಗಿಂತ ಮುಂದಿದೆ. ಅದನ್ನು ಹಿಮ್ಮೆಟ್ಟುವ ಧೀರರು ಸದ್ಯಕ್ಕೆ ಕಾಣುತ್ತಿಲ್ಲ. ಕಸ ಕೊಟ್ಟರೂ ರಸ ಮಾಡಿಕೊಳ್ಳುವ ಕಲೆ ಆ ಚಾನೆಲ್‌ನ ಸಿಬ್ಬಂದಿಗಿದೆ. ಯಾರು ಬಿಟ್ಟು ಹೋದರೂ ಕ್ಯಾರೇ ಅನ್ನದೇ, ಹೊಸ ಹುಡುಗ-ಹುಡುಗಿಯರನ್ನು ಸಿದ್ಧಪಡಿಸುವ ಛಾತಿ ಅವರಿಗಿದೆ. ಇನ್ನು ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ಸುವರ್ಣ ನ್ಯೂಸ್ ನಿರ್ದಿಷ್ಟ ಪೊಲಿಟಿಕಲ್ ಅಜೆಂಡಾಗಳೊಂದಿಗೆ ಮುನ್ನುಗ್ಗುತ್ತಿದೆ. ಸುವರ್ಣ ನ್ಯೂಸ್‌ಗೆ ಫೈಟಿಂಗ್ ಮಾಡುತ್ತಿರುವುದು ಜನಶ್ರೀ. ಈ ಚಾನಲ್‌ನ ವಿಶೇಷವೆಂದರೆ ಕಸ್ತೂರಿ ಟಿವಿಯ ಹಾಗೆ ಇದು ಮಾಲೀಕರ ತುತ್ತೂರಿಯಾಗಲಿಲ್ಲ. ಅದರ ಪರಿಣಾಮಗಳು ಈಗ ಕಾಣಿಸುತ್ತಿವೆ.ಇಂಥ ಸನ್ನಿವೇಶದಲ್ಲಿ ಜಿ.ಎನ್.ಮೋಹನ್ ಸಮಯದಲ್ಲಿ ಏನೇನು ಮಾಡಬಹುದು? ಪಾತಾಳಕ್ಕೆ ಇಳಿದಿರುವ ಟಿಆರ್‌ಪಿ ಎತ್ತಲು ಅವರಿಂದ ಸಾಧ್ಯವೇ? 24x7ನ್ಯೂಸ್ ಚಾನಲ್‌ನ ಗ್ರಾಮರುಗಳಿಗೆ ಅವರು ಒಗ್ಗಿಕೊಳ್ಳಬಹುದೇ? ಕಾದು ನೊಡೋಣ ಅಲ್ಲವೇ..?

No comments:

Post a Comment