Saturday, February 25, 2012

ಚಾನೆಲ್ಲಿಗಳ ಹಲ್ಕತನ, ಇದು ಇವರಿಗೆ ಶೋಭೆನಾ ?


ಒಟ್ಟು ಹನ್ನೆರಡು ನಿಮಿಷಗಳ ಟೇಪು ನಮ್ಮ ಬಳಿ ಇದೆ ಎಂದು ಚಾನಲ್ಗಳು ಹೇಳಿಕೊಳ್ಳುತ್ತಿವೆ. ಅದು ಸ್ಥಳೀಯ ಮತ್ತು ರಾಷ್ಟ್ರಮಟ್ಟದ ಚಾನಲ್ ಗಳಲ್ಲಿ ಪ್ರಸಾರವಾಗಿದ್ದು ಎಷ್ಟು ಗಂಟೆಗಳ ಕಾಲ? ಐಬಿಎನ್ ನಂಥ ಚಾನಲ್ ಗಳು ಮೊಬೈಲ್ ಪರದೆಯನ್ನು ಪೂರ್ತಿ ಮಸುಕು ಮಾಡಿ ಪ್ರಸಾರ ಮಾಡಿದವು. ಕನ್ನಡದ ಕೆಲ ಚಾನಲ್ಗಳು ಅರೆಬರೆ ಮಸುಕು ಮಾಡಿ ಗಂಟೆಗಟ್ಟಲೆ ಪ್ರಸಾರ ಮಾಡಿದವು. ಆರಂಭದಲ್ಲಂತೂ ಕೆಲ ಚಾನಲ್ ಳು ಒಂಚೂರೂ ಮುಸುಕು ಮಾಡದೇ, ನೀಲಿಚಿತ್ರಗಳನ್ನು ಯಥಾವತ್ತಾಗಿ ಪ್ರಸಾರವನ್ನೇ ಮಾಡಿಬಿಟ್ಟವು.

ಮುಠ್ಠಾಳ ಮಂತ್ರಿಯೊಬ್ಬ ವಿಧಾನಸಭೆಯಲ್ಲಿ ಕುಳಿತು ನೀಲಿಚಿತ್ರ ನೋಡಿದ. ಅದನ್ನು ಇನ್ನೊಬ್ಬ ಮಂತ್ರಿ ಇಣುಕಿದ. ತನ್ನ ಮೊಬೈಲನ್ನು ಕೊಟ್ಟು ಈ ಚಿತ್ರಗಳನ್ನು ನೋಡಿ ಎಂದವನು ಮತ್ತೊಬ್ಬ ಮಂತ್ರಿ. ಈ ನೀಚ ಕೆಲಸಕ್ಕೆ ಆ ಮೂವರೂ ಮಂತ್ರಿಪದವಿ ಕಳೆದುಕೊಂಡಿದ್ದಾರೆ. ಟಿವಿ ಚಾನಲ್ಗಳು ಸಾಹಸಕ್ಕೆ ಶಹಬ್ಬಾಸ್ ಅನ್ನೋಣ.

ಆದರೆ ಇದೇ ಚಾನಲ್ ಗಳು ಇದೇ ಬ್ಲೂಫಿಲ್ಮ್ ನ ತುಣುಕುಗಳನ್ನು ಕೋಟ್ಯಂತರ ಜನರು ನೋಡುವಂತೆ ಮಾಡಿದರಲ್ಲ? ಬ್ಲೂಫಿಲ್ಮ್ ಏನೆಂದೇ ಅರಿಯದ ಲಕ್ಷಾಂತರ ಮುಗ್ಧರಿಗೂ ಅವುಗಳನ್ನು ತೋರಿಸಿದರಲ್ಲ? ಈ ಅಪರಾಧಕ್ಕೆ ಶಿಕ್ಷೆ ಕೊಡುವವರು ಯಾರು? ಸಚಿವತ್ರಯರ ನೀಲಿಚಿತ್ರ ವೀಕ್ಷಣೆಯನ್ನು ಹಲವು ಹಾಡುಗಳನ್ನು ಬಳಸಿ ತಮಾಶೆಯಾಗಿ ತೋರಿಸುವ ಪ್ರಯತ್ನವನ್ನೂ ಚಾನಲ್ಗಳು ಮಾಡಿದವು. ಜತೆಗೆ ಅಯ್ಯೋ ಅಮ್ಮಾ ಎನ್ನುವ ಹೆಣ್ಣು ಕಂಠದ ಕಾಮೋದ್ವೇಗದ ಆರ್ತನಾದವೂ ಕೇಳಿಬಂತು. ಮನೆಮಕ್ಕಳು, ಹೆಂಗಸರು, ಹಿರಿಯರು ಇದನ್ನು ನೋಡಲು ಸಾಧ್ಯವೇ ಎಂಬ ಕನಿಷ್ಠ ಸಾಮಾನ್ಯಪ್ರಜ್ಞೆಯನ್ನೂ ಚಾನಲ್ಗಳು ಮರೆತವು. ಅವರಿಗೆ ತತ್ ಕ್ಷಣದ ಟಿಆರ್ ಪಿ ಬೇಕಿತ್ತು. ಇತರ ಚಾನಲ್ ಗಳನ್ನು ಹಿಂದಿಕ್ಕುವುದು ಹೇಗೆ ಎಂಬುದೇ ಚಿಂತೆಯಾಗಿತ್ತು. ಹೀಗಾಗಿ ಒಂದಕ್ಕೊಂದು ಸ್ಪರ್ಧೆ ನಡೆಸುತ್ತಾ, ಲಕ್ಷಾಂತರ ಜನರಿಗೆ ನೀಲಿ ಚಿತ್ರಗಳನ್ನು ತೋರಿಸಿಯೇಬಿಟ್ಟವು, ಗಂಟೆಗಟ್ಟಲೆ, ದಿನಗಟ್ಟಲೆ...

ಇಷ್ಟೆಲ್ಲ ಮಾಡುವ ಚಾನಲ್ ಗಳ ನಿರೂಪಕರು ಸಚಿವತ್ರಯರನ್ನು ಪೋಲಿಗಳು, ಕಾಮಾಂಧರು, ದರ್ಟಿ ಪಾಲಿಟಿಷಿಯನ್ಸ್ ಎಂದೆಲ್ಲಾ ನೇರಾನೇರ ಬೈಯುತ್ತಲೇ ಇದ್ದರು. ಜನರ ಆಕ್ರೋಶವನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ಅವಕಾಶವನ್ನೂ ಯಾವ ನಿರೂಪಕನೂ ಬಿಡಲಿಲ್ಲ. ಆದರೆ ಅದೇ ಸಮಯಕ್ಕೆ ಸಚಿವತ್ರಯರು ಮಾಡಿದ ಅಪರಾಧಕ್ಕಿಂತ ಹೆಚ್ಚಿನ ಪ್ರಮಾದವನ್ನು ತಾವೇ ಮಡುತ್ತಿದ್ದೇವೆಂಬುದನ್ನು ಅವರು ಮರೆತರು.

ಎಷ್ಟು ವಿಚಿತ್ರವೆಂದರೆ ಪ್ರತಿ ನ್ಯೂಸ್ ಚಾನಲ್ಗಳೂ ಸಚಿವರ ಬ್ಲೂಫಿಲ್ಮ್ ವೀಕ್ಷಣೆಯ ಸುದ್ದಿಯನ್ನು ಬ್ರೆಕ್ ಮಾಡಿದ್ದು ತಾವೇ ಮೊದಲು ಎಂದು ಹೇಳಿಕೊಂಡವು. ಕೆಲ ಚಾನಲ್ಗಳಂತೂ ತಮ್ಮ ಕ್ಯಾಮರಾಮೆನ್ಗಳ ಸಂದರ್ಶನವನ್ನೂ ಪ್ರಸಾರ ಮಾಡಿದವು. ಒಂದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಉದ್ದೇಶದ ಸುದ್ದಿಯನ್ನು ಬಿತ್ತರಿಸುವ ಧಾವಂತಕ್ಕಿಂತ, ಈ ಸುದ್ದಿ ಹಿಡಿದುತಂದಿದ್ದು ನಾವೇ ಎಂಬ ಅಹಂ ಮತ್ತು ಅದರಿಂದ ಬರುವ ಲಾಭವೇ ಚಾನಲ್ ಗಳಿಗೆ ಮುಖ್ಯವಾದಂತೆ ಕಂಡುಬಂತು.

ವಿಧಾನಸೌಧದಲ್ಲಿ ಕಲಾಪ ನಡೆಯುವಾಗಲೇ ಸಚಿವರುಗಳು ಬ್ಲೂಫಿಲ್ಮ್ ನೋಡಿದರು. ನೈತಿಕ ದೃಷ್ಟಿಯಿಂದ, ಕಾನೂನಿನ ದೃಷ್ಟಿಯಿಂದ ಇದು ಅಪರಾಧ. ಅದನ್ನು ಬಯಲು ಮಾಡಿದ್ದೂ ಕೂಡ ಶ್ಲಾಘನೀಯವೇ ಹೌದು. ಆದರೆ ಅದನ್ನು ಹೇಳುವ ಭರದಲ್ಲಿ ಚಾನಲ್ಗಳು ಹದ್ದುಮೀರಿ ಯಥಾವತ್ ದೃಶ್ಯಗಳನ್ನು ಪ್ರಸಾರ ಮಾಡಿದವು. ಅದು ಅನಿವಾರ್ಯವೇನೂ ಆಗಿರಲಿಲ್ಲ. ಅದಕ್ಕೆ ಹೊರತಾದ ಮಾರ್ಗವೂ ಇತ್ತು. ಚಾನಲ್ ಗಳ ಮುಖ್ಯಸ್ಥರ ಜಾಗದಲ್ಲಿ ಕುಳಿತವರು ಆತ್ಮವಂಚಕರಾದಾಗ ಹೀಗೆಲ್ಲಾ ಆಗಿಬಿಡುತ್ತದೆ.

ಇಷ್ಟೆಲ್ಲ ಮಾಡಿದ ಚಾನಲ್ ಗಳು ಸ್ವತಃ ಲಕ್ಷ್ಣಣ ಸವದಿಯೇ ಪ್ರತಿಕ್ರಿಯೆ ನೀಡುತ್ತಿದ್ದಾಗ ಆತನನ್ನು ಸರಿಯಾದ ದಾರಿಯಲ್ಲಿ ಪ್ರಶ್ನಿಸಲು ವಿಫಲವಾದವು. ಲಕ್ಷ್ಮಣ ಸವದಿಯ ಪ್ರಕಾರ ಆತ ನೋಡಿದ್ದು ಬೇರೊಂದು ದೇಶದಲ್ಲಿ ನಡೆದ ನೈಜ ಘಟನೆಯೊಂದರ ವಿಡಿಯೋ. ಒಬ್ಬ ಹುಡುಗಿಯನ್ನು ನಾಲ್ವರು ಹುಡುಗರು ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯನ್ನು ಕೊಲ್ಲುತ್ತಾರೆ, ಆಕೆಯ ರುಂಡಮುಂಡಗಳನ್ನು ಬೇರ್ಪಡಿಸುತ್ತಾರೆ. ಪೊಲೀಸರು ನಾಲ್ವರನ್ನು ಬಂಧಿಸಿ ಸಾರ್ವಜನಿಕವಾಗಿ ನೇಣು ಹಾಕುತ್ತಾರೆ. ಇದು ಸವದಿ ನೋಡಿದ ವಿಡಿಯೋವಂತೆ.

ನೀಲಿಚಿತ್ರಗಳಲ್ಲಿ ಕಾಣಿಸಿಕೊಳ್ಳುವ ನಟ ನಟಿಯರು ಸ್ವ ಇಚ್ಛೆಯಿಂದ ಲೈಂಗಿಕ ಕ್ರಿಯೆಗೆ ಒಳಗಾಗುತ್ತಾರೆ, ಅತ್ಯಾಚಾರ ಪ್ರಕರಣ ಹಾಗಲ್ಲ. ನೀಲಿ ಚಿತ್ರಗಳನ್ನು ನೋಡುವವರಿಗೂ ಅತ್ಯಾಚಾರ ದೃಶ್ಯಗಳನ್ನು ನೋಡುವ ಮನಸ್ಸಾಗುವ ಸಾಧ್ಯತೆ ಕಡಿಮೆ. ಈ ರೀತಿಯ ಸಾಮೂಹಿಕ ಅತ್ಯಾಚಾರ ದೃಶ್ಯವನ್ನು ನೋಡುವವರು ವಿಕೃತರೂ, ಕ್ರೂರ ಮನಸ್ಸಿನವರೂ ಸ್ಯಾಡಿಸ್ಟ್ ಗಳೂ ಆಗಿರಬೇಕು. ನೀವು ನೀಲಿ ಚಿತ್ರಗಳನ್ನು ನೋಡುವುದಕ್ಕಿಂತ ದೊಡ್ಡ ಅಪರಾಧ ಮಾಡಿದ್ದೀರಿ ಎಂದು ಚಾನಲ್ ನಿರೂಪಕರು ಕೇಳಬಹುದಿತ್ತು, ಕೇಳಲಿಲ್ಲ.

ಇತ್ತೀಚಿಗೆ ನ್ಯೂಸ್ ಚಾನಲ್ ಗಳು ಬಾಲಿವುಡ್ ನ ಹಸಿಹಸಿ ಸೆಕ್ಸ್ ದೃಶ್ಯಗಳಿರುವ ಸಿನಿಮಾಗಳ ತುಣುಕುಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳನ್ನು ನೀಡುತ್ತ ಬಂದಿವೆ. ನೀಲಿ ಚಿತ್ರಗಳಿಗೆ ಕಡಿಮೆಯಿಲ್ಲದಂತೆ ಇರುವ ಹಲವು ಸಿನಿಮಾಗಳ ದೃಶ್ಯಗಳನ್ನು ಒಂದೆಡೆ ಸೇರಿಸಿ ಪ್ಯಾಕೇಜ್ ರೂಪದಲ್ಲಿ ಕೊಡುತ್ತ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತ ಬಂದಿವೆ. ಸಚಿವರುಗಳ ಸೆಕ್ಸ್ ದೃಶ್ಯ ವೀಕ್ಷಣೆಯನ್ನು ಖಂಡಿಸುವ ಜತೆಜತೆಗೆ ತಾವೇನು ಮಾಡುತ್ತಿದ್ದೇವೆಂಬುದನ್ನೂ ಈ ಚಾನಲ್ಗಳು ಆತ್ಮವಿಮರ್ಶೆ ಮಾಡಿಕೊಳ್ಳಲಿ.

ಸಚಿವತ್ರಯರು ಕರ್ನಾಟಕದ ಮಾನವನ್ನು ರಾಷ್ಟ್ರ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದರು. ನಮ್ಮ ಚಾನಲ್ ಗಳು ಕರ್ನಾಟಕದ ಮನಸ್ಸುಗಳನ್ನೇ ಕೆಡಿಸುವ ಕೆಲಸ ಮಾಡಿದವು. ಯಾರ ಅಂಕೆಗೂ ಸಿಗದ ಚಾನಲ್ಗಳು ಇನ್ನೇನೇನು ಅನಾಹುತಗಳನ್ನು ಮಾಡುತ್ತವೆಯೋ ಕಾದು ನೋಡಬೇಕು.