Sunday, October 16, 2011

ಸಮಯ ಟಿವಿಗೆ ಲಕ್ಷ್ಮಿಯರೆಲ್ಲ ಪತಿಗಳ ಪಾಲಿನ ವಿನಾಶಿಗಳು..

24x7 ಚಾನೆಲುಗಳನ್ನು ಅದರಲ್ಲೂ ಕನ್ನಡ ಸುದ್ದಿ ಚಾನೆಲ್ ಗಳನ್ನು ವೀಕ್ಷಣೆ ಮಾಡುವುದು ಎಂದರೆ ವಾಕರಿಕೆ. ನಿಮಗೂ ಇದರ ಅನುಭವವಾಗಿರ ಬಹುದು.ಎಂಥ ಅದೇಂಥ ಸಂಬಂಧಗಳನ್ನು ಮನಸ್ಸಿನಲ್ಲೇ ಕಲ್ಪಿಸಿ ಅದಕ್ಕೊಂದು ರೂಪ ಕೊಡುತ್ತಾರೋ ಅ ಸೃಷ್ಟಿ ಕರ್ತ ಬೃಹ್ಮನೂ ಸೋತಾಂಗೆ.. ಚಾನಲ್‌ಗಳಿಗೂ, ಜ್ಯೋತಿಷಿಗಳಿಗೂ ಯಾವ ಜನ್ಮಜನ್ಮಾಂತರದ ಸಂಬಂಧವೋ ಗೊತ್ತಿಲ್ಲ. ಮೊನ್ನೆಮೊನ್ನೆ ತಾನೇ ಟಿವಿ ೯ ನವರು ದರ್ಶನ್ ಮತ್ತು ಆತನ ಹೆಂಡತಿಯ ಜ್ಯೋತಿಷ್ಯವನ್ನು ಹಿಡಿದುಕೊಂಡು ಯಾರೋ ತಲೆಮಾಸಿದ ಜ್ಯೋತಿಷಿಗಳನ್ನು ಕೂರಿಸಿಕೊಂಡು ಚರ್ಚೆ ನಡೆಸುತ್ತಿದ್ದರು. ಅವನ್ಯಾರೋ ಮುಠ್ಠಾಳ ಕಂಠಭರ್ತಿ ಕುಡಿದು ಹೆಂಡತಿಯನ್ನು ಹೊಡೆದರೆ ಅದಕ್ಕೆ ಜ್ಯೋತಿಷ್ಯ ಏನು ಮಾಡುತ್ತೋ ಭಗವಂತನೇ ಬಲ್ಲ.ಸಮಯ ಟಿವಿಯಲ್ಲಿ ಮತ್ತೊಂದು ಪ್ರಹಸನ. ಸಾಯಿಬಾಬಾ ಸತ್ತ ಕೆಲ ದಿನಗಳಲ್ಲೇ ಬಾಬಾರ ಆತ್ಮವನ್ನು ಸಮಯ ಟಿವಿಯ ಸ್ಟುಡಿಯೋಗೆ ಕರೆಸಿ ಮಾತನಾಡಿಸಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದನ್ನು ನೀವು ಬಲ್ಲಿರಿ. ಈಗ ವಿಚಿತ್ರವಾದ ಇನ್ನೊಂದು ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ. ಅದರ ಕಥೆಯೂ ಮಜಬೂತಾಗಿದೆ.
ಲಕ್ಷ್ಮಿಪತಿಯರಿಗೆ ಕಂಟಕ ಎನ್ನುವುದು ಕಾರ್ಯಕ್ರಮದ ಥೀಮು. ಕಾರ್ಯಕ್ರಮ ನಡೆಸಿದವರ ಪ್ರಕಾರ ಯಾರ ಹೆಸರು ಲಕ್ಷ್ಮಿ ಅಂತ ಇದೆಯೋ ಅವರ ಪತಿಯರಿಗೆಲ್ಲ ಕಂಟಕವಂತೆ. ಇದಕ್ಕೆ ಅವರು ಉದಾಹರಣೆಯಾಗಿ ಕೊಟ್ಟಿದ್ದು ಜನಾರ್ದನ ರೆಡ್ಡಿ, ವೀರಪ್ಪನ್, ಗ್ಯಾರಹಳ್ಳಿ ತಮ್ಮಯ್ಯ. ಸ್ಟುಡಿಯೋದಲ್ಲಿದ್ದ ಜ್ಯೋತಿಷಿಗಳಿಬ್ಬರು ಲಕ್ಷ್ಮಿ ಅನ್ನೋ ಹೆಸರೇ ಸರಿಯಲ್ಲ ಅನ್ನೋ ಹಂಗೆ ಮಾತಾಡಿದರು. ಒಬ್ಬನಂತೂ ಸರಸ್ವತಿ ಅಂತನೂ ಹೆಸರು ಇಟ್ಟುಕೊಳ್ಳಬಾರದು ಎಂದು ಆದೇಶ ಕೊಟ್ಟರು.ಜನಾರ್ದನ ರೆಡ್ಡಿಯ ಪತ್ನಿಯ ಹೆಸರು ಅರುಣಾ ಲಕ್ಷ್ಮಿ. ಹೀಗಾಗಿ ರೆಡ್ಡಿಗೆ ಕಂಟಕವಂತೆ. ನಾಡಿನ ಭೂಮಿಯನ್ನು ಅಗೆದು ದೋಚಿ, ಮಾಡಬಾರದ್ದನ್ನೆಲ್ಲ ಮಾಡಿ ರೆಡ್ಡಿ ಜೈಲುಪಾಲಾದರೆ ಅದಕ್ಕೆ ಅರುಣಾ ಲಕ್ಷ್ಮಿ ಏನು ಮಾಡಿಯಾಳು? ಯಾರಾದರೂ ಕಾಮನ್‌ಸೆನ್ಸ್ ಇರುವವರು ಹೇಳುವ ಮಾತೇ ಇದು? ಇದೀಗ ಸೂಪರ್ ಸಿ ಎಂ ಯಡ್ಡಿ ಜೂಲು ಪಾಲಗಿದ್ದಾರೆ ಸ್ವಾಮೀ ? ಇದಕ್ಕೂ ಏನಾದರೂ ಸಂಬಂಧ ಉಂಟೆ ?
ಇನ್ನು ವೀರಪ್ಪನ್‌ಗೂ ಮುತ್ತುಲಕ್ಷ್ಮಿಯ ಹೆಸರಿಗೂ ಏನು ಸಂಬಂಧ? ಮುತ್ತುಲಕ್ಷ್ಮಿಯನ್ನು ಮದುವೆಯಾಗುವುದಕ್ಕೂ ಮುನ್ನವೇ ವೀರಪ್ಪನ್ ಕಾಡುಗಳ್ಳನಾಗಿದ್ದ, ಪೊಲೀಸು, ಅರಣ್ಯ ಅಧಿಕಾರಿಗಳನ್ನು ಕೊಂದಿದ್ದ. ಅವನ ಪಾಪಕ್ಕೆ ಅವನು ಪೊಲೀಸರ ಗುಂಡಿಗೆ ಸಿಕ್ಕು ಸತ್ತ. ಇದರಲ್ಲಿ ಮುತ್ತುಲಕ್ಷ್ಮಿಯ ಪಾತ್ರವೇನು ಬಂತು? ಮುತ್ತುಲಕ್ಷ್ಮಿಯಲ್ಲದೆ ಬೇರೆ ಇನ್ಯಾರೋ ಆಶಾ, ರೇಖಾ, ವಾಣಿಯನ್ನು ಆತ ಮದುವೆಯಾಗಿದ್ದರೆ ಪೊಲೀಸರು ಮಾಫಿ ಮಾಡುತ್ತಿದ್ದರಾ?
ಮೂರನೇ ಉದಾಹರಣೆ ಗ್ಯಾರಹಳ್ಳಿ ತಮ್ಮಯ್ಯನದು. ಆತನ ಹೆಂಡತಿಯ ಹೆಸರು ವರಮಹಾಲಕ್ಷ್ಮಿ. ಗ್ಯಾರಹಳ್ಳಿ ತಮ್ಮಯ್ಯ ಹಿಂದೆ ಮತ್ತೊಬ್ಬ ರೌಡಿ ಹಾ.ರಾ.ನಾಗರಾಜನನ್ನು ಕೊಂದುಹಾಕಿದ್ದ. ನಾಗರಾಜನ ಮಕ್ಕಳು ದ್ವೇಷ ಇಟ್ಟುಕೊಂಡು ತಮ್ಮಯ್ಯನನ್ನು ಮುಗಿಸಿದರು. ಇವರಿಬ್ಬರ ದ್ವೇಷಕ್ಕೆ ವರಮಹಾಲಕ್ಷ್ಮಿಯ ಹೆಸರು ಏಕೆ ಹೊಣೆ ಹೊರಬೇಕು? ನಾಗರಾಜನೂ ಸತ್ತನಲ್ಲ, ಆತನ ಹೆಂಡತಿಯ ಹೆಸರು ಲಕ್ಷ್ಮಿ ಅಲ್ಲವಲ್ಲ? ಅವನೇಕೆ ಸತ್ತ?
ಜೈಲಿನಲ್ಲಿ ಮುದ್ದೆ ಮುರಿದುಕೊಂಡು ಬಿದ್ದಿರುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಕಟ್ಟಾ ಮತ್ತವರ ಮಗ ಗ್ರಾಂಗಟ್ಟಲೆ ಅನ್ನ ತಿನ್ನುತ್ತಿದ್ದಾರೆ. ರಾಜಾ, ಕನ್ನಿಮೋಳಿ, ಅಮರಸಿಂಗ್, ಸುಧೀಂದ್ರ ಕುಲಕರ್ಣಿ, ಸತ್ಯಂ ರಾಜು ಇತ್ಯಾದಿಗಳು ಜೈಲು ಸೇರಿವೆ. ಅಕ್ಟೋಬರ್ ಮೂರರ ನಂತರ ಇನ್ನೂ ಸಾಕಷ್ಟು ಮಂದಿ ವಿವಿಐಪಿಗಳು ಜೈಲು ಪಾಲಾಗುವ ಸಾಧ್ಯತೆಗಳಿವೆ. ಇವರೆಲ್ಲರ ಪತ್ನಿಯರ ಹೆಸರೂ ಲಕ್ಷ್ಮಿ ಎಂತಲೇ ಇವೆಯೇ?
ಅದೆಲ್ಲ ಹಾಗಿರಲಿ, ಅನಿಷ್ಟಕ್ಕೆಲ್ಲ ಹೆಣ್ಣುಮಕ್ಕಳನ್ನೇ ದೂರುವುದು ಯಾಕೆ? ಈಗಲೂ ಹೆಣ್ಣುಮಕ್ಕಳ ಕಾಲ್ಗುಣ, ಕೈಗುಣ ಇತ್ಯಾದಿ ಕಪೋಲಕಲ್ಪಿತ ನಂಬಿಕೆಗಳನ್ನೆಲ್ಲ ಹೇರಿ ಅವರನ್ನು ಶೋಷಿಸಲಾಗುತ್ತಿದೆ. ಈಗ ಅವರ ಹೆಸರೂ ಅವರ ಪಾಲಿನ ಶತ್ರುವಾದರೆ ಹೇಗೆ?
ಲಕ್ಷ್ಮಿ ಎನ್ನುವುದು ಅತ್ಯಂತ ಪಾಪ್ಯುಲರ್ ಆದ ಹೆಸರು. ಈ ಹೆಸರಿರುವ ಲಕ್ಷಾಂತರ ಹೆಣ್ಣುಮಕ್ಕಳು ನಾಡಿನಲ್ಲಿದ್ದಾರೆ. ಇವರೆಲ್ಲರಿಗೂ ಸಮಯ ಟಿವಿ ಕೊಡುವ ಸಂದೇಶವಾದರೂ ಏನು? ನಿಮ್ಮ ಹೆಸರು ಬದಲಾಯಿಸಿಕೊಳ್ಳಿ ಅಂತಾನಾ? ಈ ಹೆಣ್ಣುಮಕ್ಕಳ ಗಂಡಂದಿರಿಗೆ ಕೊಡುವ ಸಂದೇಶ ಏನು? ಡೈವೋರ್ಸ್ ಮಾಡಿಬಿಡಿ ಎಂದೇ?
ಕೇವಲ ಅಗ್ಗದ ಜನಪ್ರಿಯತೆಗಾಗಿ ಸಮಯ ಟಿವಿಯವರು ಇಂಥ ಹರಕು-ಮುರುಕು ದ್ದನ್ನೆಲ್ಲ ಮಾಡುತ್ತಿದ್ದಾರೆ ಎನ್ನುವುದಾದರೆ ಪ್ರಜ್ಞಾವಂತ ವೀಕ್ಷಕರಿಗೆ ಅದು ಕನಿಷ್ಠ ಕನಿಕರವನ್ನೂ ಮೂಡಿಸುವುದಿಲ್ಲ, ಬದಲಾಗಿ ಅಸಹ್ಯ ಮೂಡಿಸುತ್ತದೆ.
ಎಂದೂ ಸತ್ಯವನ್ನೇ ಹೇಳದ ಜಿ.ಎನ್ ನ ಹೆಂಡತಿ ಹೆಸರು ಸತ್ಯ ಇದರ ಬಗ್ಗೆಯೂ ಸಮಯ ಟೀವಿಯವರು ಒಬ್ಬ ಜ್ಯೋತಿಷಿಯನ್ನು ಸ್ಟುಡಿಯೋದಲ್ಲಿ ಕೂರುಸುವುದು ಕ್ಷೇಮವಲ್ಲವೇ? ಕೇವಲ ಟಿ ಆರ್ ಪಿ ಗಾಗಿ ಇತರರನ್ನು ಬಲಿ ಕೊಡುವ ಇವರು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಹಾಗಾಗದಿರಲಿ ಎಂಬುದು ನಮ್ಮ ಪ್ರಾಮಾಣಿಕ ಆಶಯ.